ಕನೌಜ್ : ಉತ್ತರಪ್ರದೇಶದ ಫರೂಖಾಬಾದ್ ಜಿಲ್ಲೆಯಲ್ಲಿ ಗಂಗಾನದಿಯ ಬಲದಂಡೆಯ ಮೇಲಿರುವ ಒಂದು ಪ್ರಾಚೀನ ಪಟ್ಟಣ; ತಹಸೀಲು ಕಾನ್ಪುರದ ವಾಯವ್ಯಕ್ಕೆ ಅದರಿಂದ 85 ಕಿಮೀ ದೂರದಲ್ಲಿ, ದೆಹಲಿಯ ಹೆದ್ದಾರಿಯಲ್ಲಿದೆ. 1961ರಲ್ಲಿದ್ದಂತೆ ಈ ಪಟ್ಟಣದ ಜನಸಂಖ್ಯೆ 24.648. ತಹಸೀಲಿನ ವಿಸ್ತೀರ್ಣ 1017.86606 ಚಕಿಮೀ; ಜನಸಂಖ್ಯೆ 84,862 (2001).

ಕನೌಜ್ ಬಲು ಪುರಾತನ ಪಟ್ಟಣ. ಪ್ರಾಚೀನಕಾಲದಲ್ಲಿ ಇದಕ್ಕೆ ಕಾನ್ಯಕುಬ್ಜ, ಕನ್ಯಾಕುಬ್ಜ ಅಥವಾ ಕನ್ಯಕುಬ್ಜ ಎಂಬ ಹೆಸರಿತ್ತು. ಇತಿಹಾಸದ ಉದ್ದಕ್ಕೂ ಗ್ರಂಥಗಳಲ್ಲಿ ಈ ಹೆಸರನ್ನು ಬಳಸಿರುವುದು ಕಂಡುಬರುತ್ತದೆ. ಮಹೋದಯ (ಮಹೋದಯಾ) ಎಂಬ ಹೆಸರೂ ಇದಕ್ಕಿತ್ತು. ಕಾನ್ಯಕುಬ್ಜ ಮಹೋದಯಗಳೆರಡೂ ಒಂದೇ ಪಟ್ಟಣದ ಹೆಸರುಗಳೆನ್ನಲು ಹಲವು ಕೋಶಗಳಲ್ಲಿ ಉಲ್ಲೇಖಗಳಿವೆ. ಕುಶಸ್ಥಲವೆಂಬ ಹೆಸರೂ ಇದಕ್ಕಿತ್ತು. ಕುಶ ಅಥವಾ ದರ್ಭೆಯ ಹುಲ್ಲಿರುವ ಸ್ಥಳ ಎಂಬ ಕಾರಣದಿಂದ, ಇಲ್ಲವೇ ಕುಶನೆಂಬ ದೊರೆಯ ವಾಸಸ್ಥಳವಾದ್ದರಿಂದ ಇದಕ್ಕೆ ಈ ಹೆಸರು ಬಂದಿರಬೇಕು. ಈ ನಗರವನ್ನು ಕುಸುಮಪುರವೆಂದು ಕರೆಯಲಾಗುತ್ತಿತ್ತೆಂದೂ ಕಾನ್ಯಕುಬ್ಜವೆಂಬ ಹೆಸರು ಆಮೇಲೆ ಬಂದಿತೆಂದೂ ಯುವಾನ್ ಚ್ವಾಂಗ್ ಹೇಳುತ್ತಾನೆ.

ಕಾನ್ಯಕುಬ್ಜವೆಂಬ ಹೆಸರು ಬಂದುದೇಕೆಂಬ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಸ್ವಾರಸ್ಯವಾದ ಕಥೆಯೊಂದಿದೆ. ಕುಶನೆಂಬ ದೊರೆಯೊಬ್ಬ ವಿದರ್ಭದ ದೊರೆಯ ಮಗಳನ್ನು ಮದುವೆಯಾಗಿದ್ದ. ಅವನಿಗೆ ಕುಶನಾಭ, ಕುಶಾಂಭ, ಅಸೂರ್ತರಾಜ ಮತ್ತು ವಸು ಎಂಬ ನಾಲ್ವರು ಮಕ್ಕಳಿದ್ದರು. ದೊರೆಯ ಇಚ್ಛೆಯಂತೆ ಈ ನಾಲ್ವರೂ ನಾಲ್ಕು ಪಟ್ಟಣಗಳನ್ನು ನಿರ್ಮಿಸಿದರು. ಕುಶನಾಭ ನಿರ್ಮಿಸಿದ ಪಟ್ಟಣದ ಹೆಸರು ಮಹೋದಯ. ಕುಶನಾಭನಿಗೆ ಪತ್ನಿ ಘೃತಾಚಿಯಲ್ಲಿ ನೂರು ಮಂದಿ ಹೆಣ್ಣುಮಕ್ಕಳಾದರು. ವಾಯು ಅವರ ಸೌಂದರ್ಯಕ್ಕೆ ಮಾರುಹೋಗಿ ಅವರನ್ನೆಲ್ಲ ವಿವಾಹವಾಗ ಬಂiÀÄಸಿದ. ಇದಕ್ಕೆ ಸಮ್ಮತಿ ದೊರಕದ್ದರಿಂದ ವಾಯು ಕುಪಿತಗೊಂಡು ಅವರನ್ನೆಲ್ಲ ಕುಬ್ಜೆಯರನ್ನಾಗಿ ಮಾಡಿದ. ಆದ್ದರಿಂದಲೇ ಆ ಪಟ್ಟಣಕ್ಕೆ ಕಾನ್ಯಕುಬ್ಜವೆಂಬ ಹೆಸರು ಬಂತು. ಈ ಕಥೆ ನಿಜವಲ್ಲವಾದರೂ ಪಟ್ಟಣದ ಆರ್ಷೇಯತೆಯನ್ನು ಇದು ಸ್ಥಾಪಿಸುತ್ತದೆ. ಅನಂತರ ಕಾನ್ಯಕುಬ್ಜದಲ್ಲಿ ಆಳಿದ ಅನೇಕ ಅರಸರ ಹೆಸರುಗಳನ್ನು ನಾನಾ ಪುರಾಣಗಳಿಂದಲೂ ರಾಮಾಯಣ ಮಹಾಭಾರತಗಳಿಂದಲೂ ಸಂಗ್ರಹಿಸಬಹುದು. ಹೈಹಯರ ದೊರೆ ಅರ್ಜುನನ ಕಾಲದಲ್ಲಿ ಭೂಮಿಯ ಮೇಲೆ-ಕಾನ್ಯಕುಬ್ಜ ಸೀಮೆಯಲ್ಲಿ-ಒಬ್ಬ ಶೂರನಾದ ದೊರೆ ಅಳುತ್ತಿದ್ದನೆಂದೂ ಅವನ ಸೈನ್ಯಶಕ್ತಿ ಅಗಾಧವಾಗಿತ್ತೆಂದೂ ಅವನ ಹೆಸರು ಗಾಧಿಯೆಂದೂ ಹೇಳಲಾಗಿದೆ. ಅವನ ಮಗನೇ ವಿಶ್ವಾಮಿತ್ರ. ಈತನೂ ಕಾನ್ಯಕುಬ್ಜವನ್ನಾಳಿದ. ಪಾಂಡವರಿಗೆ ಅರ್ಧ ರಾಜ್ಯವಿಲ್ಲದಿದ್ದರೂ ಐದು ಊರುಗಳನ್ನಾದರೂ ಕೊಡಬೇಕೆಂದು ಧರ್ಮರಾಯ ದುರ್ಯೋಧನನನ್ನು ಕೇಳಿದಾಗ ಅವುಗಳಲ್ಲಿ ಕುಶಸ್ಥಲವನ್ನೂ ಹೆಸರಿಸಿದ್ದ. ಬುದ್ಧ ತ್ರಯಸ್ತ್ರಿಂಶ ಸ್ವರ್ಗವನ್ನಡರಿದ ಮೇಲೆ ಭೂಮಿಯಲ್ಲಿ ಮತ್ತೆ ಅವತಾರಮಾಡಿದ್ದು ಕಾನ್ಯಕುಬ್ಜದಲ್ಲಿ ಎನ್ನಲಾಗಿದೆ. ಜೀವನದ ದುಃಖ ನಶ್ವರಗಳ ಬಗ್ಗೆ ಅಲ್ಲಿ ಅನಂತರ ಉಪದೇಶ ಮಾಡಿದನಂತೆ.

ಮೌರ್ಯದ ಕಾಲದಲ್ಲಿ ಕನೌಜ್ ಕೂಡ ಅವರ ಆಳ್ವಿಕೆಯ ಪರಿಧಿಯೊಳಕ್ಕೆ ಸೇರಿದ್ದಿರಬೇಕು. ಅಶೋಕನ ಅನಂತರ ಮೌರ್ಯಸಾಮ್ರಾಜ್ಯ ಅವನ ಮಕ್ಕಳಲ್ಲಿ ಹರಿದು ಹಂಚಿಹೋಯಿತು. ಅವರ ಪೈಕಿ ಒಬ್ಬನಾದ ಜಲೌಕ. ಪುರ್ವದಲ್ಲಿ ಕಾನ್ಯಕುಬ್ಜದವರೆಗೂ ರಾಜ್ಯವಿಸ್ತರಿಸಿದನೆಂದು ಹೇಳಲಾಗಿದೆ.
ಮುಂದೆ ಪತಂಜಲಿಯ (ನೋಡಿ- ಪತಂಜಲಿ) ಮಹಾಭಾಷ್ಯದಲ್ಲಿ ಕಾನ್ಯಕುಬ್ಜದ ಹೆಸರು ಬರುತ್ತದೆ. ಅಹಿಚ್ಛತ್ರದಲ್ಲಿ ಹುಟ್ಟಿದವಳು ಅಹಿಚ್ಛತ್ರಿ, ಕಾನ್ಯಕುಬ್ಜದಲ್ಲಿ ಹುಟ್ಟಿದವಳು ಕಾನ್ಯಕುಬ್ಜಿ-ಎಂದು ಆತ ಹೇಳುತ್ತಾನೆ. ಎಂದರೆ ಪ್ರ.ಶ.ಪು2ನೆಯ ಶತಮಾನದಲ್ಲಿ ಕಾನ್ಯಕುಬ್ಜ ಬಹಳ ಪ್ರಸಿದ್ಧವಾಗಿದ್ದಿರಬೇಕು. ಟಾಲೆಮಿಯ ಭೂವಿವರಣೆಯಲ್ಲಿ (ಪ್ರ.ಶ.ಸು.140) ಹೇಳಿರುವ ಕನಗೋಕ, ಕನೋಗಿಜ ಎಂಬ ಸ್ಥಳ ಕಾನ್ಯಕುಬ್ಜವೇ ಅಗಿರಬೇಕೆಂಬುದು ಒಂದು ಊಹೆ.

ಕಾನ್ಯಕುಬ್ಜದ ಬಗ್ಗೆ ಇಷ್ಟಷ್ಟು ಖಚಿತ ಐತಿಹಾಸಿಕ ಮಾಹಿತಿ ದೊರಕುವುದು ಪ್ರ.ಶ 5ನೆಯ ಶತಮಾನದಲ್ಲಿ-ಪಾಹಿಯಾನದ ಬರೆವಣಿಗೆಯಿಂದ. ಆತ ಇದನ್ನು ಕಿ-ಜೌ-ಯಿ (ಕನೌಜ್) ಎಂದು ಕರೆದಿದ್ದಾನೆ. ಗಂಗಾನದಿಯ ಮೇಲಿದ್ದ ಈ ಪಟ್ಟಣದಲ್ಲಿ ಎರಡು ಸಂಘಾರಾಮಗಳಿದ್ದುವು. ಇದಕ್ಕೆ ಪಶ್ಚಿಮದಲ್ಲೇ ಬುದ್ಧ ಬೋಧಿಸಿದ ಸ್ಥಳ. ಆಗ (ಗುಪ್ತರ ಕಾಲದಲ್ಲಿ) ಇದು ಅಂಥ ದೊಡ್ಡ ಸ್ಥಳವೇನೂ ಆಗಿರಲಿಲ್ಲ.

ಆದರೆ ಪ್ರ.ಶ. 636ರಲ್ಲಿ ಹ್ಯುಯೆನ್ ತ್ಸಾಂಗ್ ಇಲ್ಲಿಗೆ ಭೇಟಿ ಕೊಡುವ ವೇಳೆಗೆ ಇದು ಅಗಾಧವಾಗಿ ಬೆಳೆದಿತ್ತು. ಇಲ್ಲಿ ಜನಸಂದಣಿ ಅಧಿಕವಾಗಿತ್ತು. ನೂರಾರು ಹಿಂದೂ ಮತ್ತು ಬೌದ್ಧ ದೇವಾಲಯಗಳೂ ವಿಹಾರಗಳೂ ಇದ್ದುವು. ಗಂಗೆಯ ಬಲತಡಿಯ ಮೇಲೆ 7 ಕಿಮೀ ಹಬ್ಬಿದ್ದ ಈ ನಗರ ರಮ್ಯ ಉದ್ಯಾನಗಳಿಂದಲೂ ಸುಂದರ ಸರೋವರಗಳಿಂದಲೂ ಶೋಭಿತವಾಗಿತ್ತಲ್ಲದೆ ಇದನ್ನು ರಕ್ಷಿಸಲು ಭದ್ರವಾದ ಕೋಟೆಯ ನಿರ್ಮಾಣವಾಗಿತ್ತು. ಈ ಮಹತ್ತರ ಬದಲಾವಣೆಗೆ ಕಾರಣನಾದವ ಚಕ್ರವರ್ತಿ ಹರ್ಷವರ್ಧನ (605-47). ಆತ ಇದನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. ಹ್ಯುಯೆನ್ತ್ಸಾಂಗ್ ಇಲ್ಲಿ ಏಳು ದಿನಗಳ ಕಾಲ ತಂಗಿದ್ದ. ಆ ಸಮಯದಲ್ಲಿ ಹರ್ಷ ಇಲ್ಲೊಂದು ಧರ್ಮಸಮ್ಮೇಳನ ನಡೆಸಿ ಹಲವರು ಸಾಮಂತರನ್ನೂ ಮಾಂಡಲಿಕರನ್ನೂ ಕರೆಸಿದ್ದ.

ಹೀಗೆ ಕಾನ್ಯಕುಬ್ಜ ಆಗ ವೈಭವದಿಂದ ಮೆರೆಯಿತು. ಮಹೋದಯ ಶ್ರೀ ಎಂಬುದಾಗಿ ಇದು ಹೆಸರು ಗಳಿಸಿತ್ತು. ಹರ್ಷವರ್ಧನನ (ನೋಡಿ- ಹರ್ಷವರ್ಧನ) ಅನಂತರ ಹಲವು ಹಿಂದೂ ಅರಸರು ಇದನ್ನು ವಶಪಡಿಸಿಕೊಳ್ಳಲು ಹಾತೊರೆಯುತ್ತಿದ್ದರು. ಆ ಕಾಲದಲ್ಲಿ ಈ ನಗರ ಹಲವಾರು ಏರಿಳಿತಗಳಿಗೆ ಒಳಗಾಯಿತು. ಪ್ರ.ಶ. 816ರಿಂದ 1090ರವರೆಗೆ ಆಳಿದ ಪ್ರತೀಹಾರ ದೊರೆಗಳಿಗೂ ಇದು ರಾಜಧಾನಿಯಾಗಿತ್ತು. ಉತ್ತರ ಭಾರತದ ಮುಖ್ಯನಗರಗಳಲ್ಲೊಂದೆನಿಸಿತು. ಬಂಗಾಳದ ದೊರೆ ಧರ್ಮಪಾಲ (ನೋಡಿ- ಧರ್ಮಪಾಲ-3) ಸ್ವಲ್ಪಕಾಲ ಇದನ್ನು ಗೆದ್ದುಕೊಂಡಿದ್ದ. ಇದು ತನ್ನ ವಶವಾಗಿತ್ತೆಂದು ಅವನಿಗೆ ಬಹಳ ಹೆಮ್ಮೆಯಾಗಿತ್ತು.

ಕನೌಜಿಗೆ ಅತ್ಯಂತ ದುರ್ದಶೆ ಬರಲಾರಂಭಿಸಿದ್ದು 1018ರಲ್ಲಿ-ಸುಲ್ತಾನ್ ಮಹಮದ್ ಘಸ್ನಿ ಇದರ ಮೇಲೆ ದಾಳಿ ಮಾಡಿ ನಗರವನ್ನು ಲೂಟಿ ಮಾಡಿದಾಗ ಆ ಸಮಯದಲ್ಲಿ ಇಲ್ಲಿ ಆಳುತ್ತಿದ್ದ ಪ್ರತೀಹಾರ ದೊರೆ ರಾಜಧಾನಿಯನ್ನು ಕನೌಜಿನಿಂದ ಗಂಗಾನದಿಯ ಆಚೆ ದಂಡೆಗೆ ಬದಲಾಯಿಸಿದ. ಪ್ರತೀಹಾರದ ಕೊನೆಯ ದೊರೆ ರಾಜ್ಯಪಾಲ. ನೆರೆರಾಜ್ಯದ ದೊರೆ ಗಂಡ ಇವನನ್ನು ಪದಚ್ಯುತನನ್ನಾಗಿ ಮಾಡಿದ. ಕನೌಜ್ 12ನೆಯ ಶತಮಾನದಲ್ಲಿ ಗಹರವಾಡ್ ರಜಪುತರಾದ ರಾಥೋಡರ ಆಳ್ವಿಕೆಗೆ ಒಳಪಟ್ಟಿತು. ಕನೌಜಿನ ಕೊನೆಯ ರಾಥೋಡ್ ದೊರೆ ಜಯಚಂದ. ಇವನನ್ನು ಷಿಹಾಬುದ್ದೀನ್ ಮಹಮ್ಮದ್ ಗೋರಿ 1194ರಲ್ಲಿ ಸೋಲಿಸಿ ಕೊಂದ. ಅಲ್ಲಿಂದೀಚೆಗೆ ಕನೌಜಿನ ಪ್ರಾಮುಖ್ಯ ನಶಿಸಿ ಹೋಯಿತು. ಮೊಗಲ್ ಚಕ್ರವರ್ತಿ ಹುಮಾಯೂನನಿಗೂ ಷೇರ್ ಷಾಹನಿಗೂ ಯುದ್ಧ ನಡೆದದ್ದು (1540) ಕನೌಜಿನ ಬಳಿಯಲ್ಲೇ. ಆ ಯುದ್ಧದಲ್ಲಿ ಹುಮಾಯೂನ್ ಸೋತ. ಷೇರ್ ಷಾಹ ಈ ನಗರವನ್ನು ನಾಶಮಾಡಿದ. ಆ ಪುರಾತನ ನಗರವಿದ್ದ ಎಡೆಯಲ್ಲಿ ಈಗ ಹಳೆಯುಳಿಕೆಯ ರಾಶಿಗಳುಂಟು. ಇವು ಸು. 7 ಕಿಮೀ ವ್ಯಾಸದ ಅರ್ಧವೃತ್ತಾಕಾರ ಪ್ರದೇಶದಲ್ಲಿ ಹರಡಿವೆ.

ಅಜಯಪಾಲರಾಜ ಕಟ್ಟಿದ ಕಟ್ಟಡ ಭಗ್ನಾವಶೇಷಗಳಲ್ಲಿ ಮುಖ್ಯವಾದದ್ದು. ಜಯಪಾಲ ಇದನ್ನು ಕಟ್ಟಿದಂತೆ ತೋರುತ್ತದೆ. ಆದರೆ ಮಹಮ್ಮದ್ ಘಸ್ನಿ ಈ ಕಟ್ಟಡವನ್ನು ಕೈವಶ ಮಾಡಿಕೊಂಡ. ಜುಮ್ಮಾಮಸೀದಿಯ ಕಡೆಗೆ ದೃಷ್ಟಿ ಬೀರಿದಾಗ, ಅಲ್ಲಿಯ ಕಂಬಗಳ ಕೆತ್ತನೆಯ ಕೆಲಸ ಕಣ್ಣಿಗೆ ಬೀಳದಿರಲಾರದು. ಪ್ರ.ಶ.ಸು. 1400ರಲ್ಲಿ ಜಾನ್ಪುರದ ಇಬ್ರಾಹಿಮ್ ಷಾಹ ಈ ಕಟ್ಟಡವನ್ನು ಮಸೀದಿಯನ್ನಾಗಿ ಪರಿವರ್ತಿಸಿದನೆಂದು ಪ್ರತೀತಿ. ಈ ಊರಿನ ವಾಯವ್ಯ ಭಾಗದಲ್ಲಿ ಬಾಲಾ ಪೀರ ಮತ್ತು ಅವನ ಮಗನಾದ ಷೇಕ್ ಮೆಹಂದಿಯ ಗೋರಿಗಳಿವೆ. ಉಳಿದ ಮಸೀದಿಗಳು ಸುತ್ತಲಿನ ಹೊಲಗಳಲ್ಲಿವೆ.

ಕನೌಜ್ ಈಗ ಹೊಗೆಸೊಪ್ಪಿನ ಮತ್ತು ಸುಗಂಧ ದ್ರವ್ಯಗಳ ತಯಾರಿಕಾ ಕೇಂದ್ರ. ಗುಡ್ಡಗಾಡಿನ ನಡುವೆ ಇರುವ ಈ ಪಟ್ಟಣದ ರಸ್ತೆಗಳು ಇಳಿಜಾರಾಗಿವೆ.	(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ